ಪುಟಿನ್ ಭೇಟಿ ಮಾಡಿದ ಜೈಶಂಕರ್; ರಸಗೊಬ್ಬರ, ಇಂಧನ, ಪರಮಾಣು ಸಹಕಾರ ಚರ್ಚೆ

putin-jaishakar-300x270-1

ಮಾಸ್ಕೋ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸೋಮವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿ ಭಾರತ-ರಷ್ಯಾ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.

ಸಭೆಯಲ್ಲಿ ವ್ಯಾಪಾರ, ಇಂಧನ, ರಸಗೊಬ್ಬರ ಪೂರೈಕೆ, ಪರಮಾಣು ಸಹಕಾರ ಹಾಗೂ ಆರ್ಥಿಕ ಬಾಂಧವ್ಯ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬಂದವು. ಭಾರತ-ರಷ್ಯಾ ನಡುವಿನ ಆರ್ಥಿಕ ಸಹಕಾರ ಗಣನೀಯವಾಗಿ ವೃದ್ಧಿಯಾಗಿರುವುದಾಗಿ ಜೈಶಂಕರ್ ಹೇಳಿದರು.

ಇದಕ್ಕೂ ಮುನ್ನ ನಡೆದ ಅಂತರ್-ಸರ್ಕಾರಿ ಆಯೋಗದ ಸಭೆಯಲ್ಲಿ ಆರ್ಥಿಕ ಸಹಕಾರದ ಹಲವು ಕ್ಷೇತ್ರಗಳ ಕುರಿತು ಚರ್ಚೆ ನಡೆದಿದ್ದು, ಉತ್ತಮ ಬೆಳವಣಿಗೆಗಳ ಬಗ್ಗೆ ವರದಿ ಸಿಕ್ಕಿದೆ ಎಂದು ಅವರು ತಿಳಿಸಿದರು.

ಭಾರತಕ್ಕೆ ರಸಗೊಬ್ಬರ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸಲು ರಷ್ಯಾ ಸಿದ್ಧವಿದೆ ಎಂದು ಅಧ್ಯಕ್ಷ ಪುಟಿನ್ ಭರವಸೆ ನೀಡಿದ್ದಾರೆ. ಮುಂದೆಯೂ ಪೂರೈಕೆ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ ಎಂದು ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ ಟಾಸ್ ವರದಿ ಮಾಡಿದೆ. ಕೃಷಿ ಕ್ಷೇತ್ರಕ್ಕೆ ರಸಗೊಬ್ಬರ ಪೂರೈಕೆ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ರಷ್ಯಾದ ಈ ಭರವಸೆ ಭಾರತಕ್ಕೆ ಮಹತ್ವದ್ದಾಗಿದೆ.

Pleased to call on President Vladimir Putin of Russia in Moscow today. Handed over a personal message from Prime Minister @narendramodi.

Briefed him on the deliberation held under the 27th IRIGC-TEC, reviewing our cooperation across a wide range of domains. Value his guidance… pic.twitter.com/jAWTLqUrEp

— Dr. S. Jaishankar (@DrSJaishankar) August 24, 2026

ಎರಡು ದಿನಗಳ ರಷ್ಯಾ ಪ್ರವಾಸದಲ್ಲಿರುವ ಜೈಶಂಕರ್ ಅವರ ಪುಟಿನ್ ಭೇಟಿ, ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ಇಂಧನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವ ಪಡೆದಿದೆ. ಮುಂದಿನ ತಿಂಗಳು ನವದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪುಟಿನ್ ಭಾಗವಹಿಸುವ ನಿರೀಕ್ಷೆಯೂ ಇದೆ.